ಪುರಂಧರ ಕೌಲು -
1776 ರ ಮಾರ್ಚ್ ತಿಂಗಳಲ್ಲಿ ಪುರಂಧರ ಕೋಟೆಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೂ ಮರಾಠರಿಗೂ ಆದ ಕೌಲು. ಈ ಕುರಿತ ಸಂಧಾನಗಳಲ್ಲಿ ಬ್ರಿಟಿಷರ ಪ್ರತಿನಿಧಿಯಾಗಿ ಕರ್ನಲ್ ಅಪ್ಟನ್ ಎಂಬುವನು ಭಾಗವಹಿಸಿದ್ದ. 1774 ರಲ್ಲಿ ವಾರ್ನ್ ಹೇಸ್ಟಿಂಗ್ಸ್ ಭಾರತದ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡಿದ್ದ. ಮುಂಬಯಿಯಲ್ಲಿ ಕಂಪನಿಯ ಅಧಿಕಾರಿ ವರ್ಗ ದೇಶೀಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನೂ ರಾಜರ ವಿರುದ್ಧವಾದ ಚಟುವಟಿಕೆಗಳನ್ನೂ ನಿಲ್ಲಿಸಲು ಆ ಸಮಯದಲ್ಲಿ ಬ್ರಿಟಿಷ್ ಕೌನ್ಸಿಲ್ ಆಜ್ಞಾಪಿಸಿತು. 

	ತಾನೇ ಪೇಶ್ವೆಯೆಂದು ಘೋಷಿಸಿಕೊಂಡ ರಘುನಾಥರಾಯನೊಂದಿಗೆ ಮುಂಬಯಿ ಸರ್ಕಾರ ಮಾಡಿಕೊಂಡಿದ್ದ ಸೂರತ್‍ಕೌಲು (1775) ಅಸಮರ್ಪಕವೆಂಬ ಕಾರಣದಿಂದ ಮರಾಠರೊಂದಿಗೆ ಯುದ್ಧ ನಡೆದಿತ್ತು. ಇದನ್ನು ನಿಲ್ಲಿಸಲೆಂದೇ ಬ್ರಿಟಿಷರು ಸಂಧಾನವನ್ನಾರಂಭಿಸಿದ್ದು. ಕಂಪೆನಿ ಸರ್ಕಾರಕ್ಕೆ ಆ ಸಮಯದಲ್ಲಿ ಯುದ್ಧಕ್ಕಾಗಿ ಖರ್ಚು ಮಾಡಲು ಹಣದ ಅಭಾವವಿತ್ತು. ಅಲ್ಲದೆ ಆ ಕೌಲನ್ನು ಮಾಡಿಕೊಂಡಾಗ ಭಾರತದಲ್ಲಿನ ಇತರ ಬ್ರಿಟಿಷ್ ವಸಾಹತುಗಳನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಅಲ್ಲದೆ, ಬ್ರಿಟಿಷ್ ಪಾರ್ಲಿಮೆಂಟು ಮಾಡಿದ್ದ ನಿರ್ಣಯಗಳಿಗೆ ಅದು ವಿರುದ್ಧವಾಗಿತ್ತು.

	ಬ್ರಿಟಿಷ್ ಕೌನ್ಸಿಲ್ಲಿನ ಆಜ್ಞೆ ಬಂದ ಸಮಯದಲ್ಲಿ ಮುಂಬಯಿಯಲ್ಲಿದ್ದ ಕಂಪೆನಿ ಸರ್ಕಾರ ದೇಶೀಯ ರಾಜರ ಯುದ್ಧ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಮಗ್ನವಾಗಿತ್ತು. ಆದ್ದರಿಂದ ಕೌನ್ಸಿಲಿನ ತೀರ್ಮಾನ ಅದಕ್ಕೆ ಅಷ್ಟಾಗಿ ಉಚಿತವೆನಿಸಲಿಲ್ಲ. ಅದು ಸರಿಯಲ್ಲವೆಂದು ವಾರ್ನ್ ಹೇಸ್ಟಿಂಗ್ಸ್ ಬಗೆದನಾದರೂ ಅದರ ಆದೇಶಕ್ಕನುಗುಣವಾಗಿ ಡಿಸೆಂಬರ್ 1775ರಲ್ಲಿ ಮರಾಠರ ಜೊತೆ ವ್ಯವಹರಿಸಿ ಒಂದು ಒಪ್ಪಂದಕ್ಕೆ ಬರಲು ಕರ್ನಲ್ ಅಪ್ಟನ್ನನನ್ನು ಕಳುಹಿಸಿದ. ಆದರೆ ಪೇಶ್ವೆ ಮನೆತನದ ಮಂತ್ರಿಗಳ ದೂರಾಲೋಚನೆ ಹಾಗೂ ದುರಾಲೋಚನೆಗಳಿಂದಾಗಿ ಯಾವೊಂದು ನಿರ್ಣಯಕ್ಕೆ ಬರಲೂ ಸಾಧ್ಯವಾಗಲಿಲ್ಲ. ಸಲ್‍ಸತ್ತೆ, ಬಸ್ಸನ್ ಇವನು ಬ್ರಿಟಿಷರಿಗೆ ಒಪ್ಪಿಸಿಕೊಡುವುದಕ್ಕಾಗಲಿ, ಭಡೋಚದ ಕಂದಾಯವನ್ನು ಬಿಟ್ಟಿಕೊಡುವುದಕ್ಕಾಗಲಿ ಅವರು ಒಪ್ಪಲಿಲ್ಲ. ಬ್ರಿಟಿಷರ ಆಶ್ರಯದಲ್ಲಿದ್ದ ರಘುನಾಥರಾಯನ ಕೈಬಿಡಬೇಕೆಂಬುದು ಮರಾಠರ ಕೇಳಿಕೆಯಾಗಿತ್ತು. ತನ್ನ ಸಂಧಾನ ಯಶಸ್ವಿಯಾಗಲಿಲ್ಲವೆಂದು ಆಪ್ಟನ್ 1776 ರ ಫೆಬ್ರವರಿ 7 ರಂದು ಕಲ್ಕತ್ತೆಗೆ ಪತ್ರ ಬರೆದ. ಆಗ ಬ್ರಿಟಿಷರು ಪುನಃ ಯುದ್ಧವನ್ನು ಆರಂಭಿಸಿದರು.

	ಅದೇ ಸಮಯಕ್ಕೆ ಸದಾಶಿವರಾವ್ ಬಾಹು ಎಂಬ ಮರಾಠಾ ನಾಯಕನೊಬ್ಬ ರತ್ನಾಗಿರಿ ಸೆರೆಮನೆಯಿಂದ ಹೊರಬಂದು ಮರಾಠಾ ಪೇಶ್ವೆ ಮಂತ್ರಿಮಂಡಲದ ವಿರುದ್ಧ ಬಂಡಾಯ ಹೂಡಿದ. ಒಂದು ಕಡೆ ಈ ಬಂಡಾಯ, ಇನ್ನೊಂದು ಕಡೆ ಬ್ರಿಟಿಷರ ಯುದ್ಧ-ಈ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡ ಮಂತ್ರಿಮಂಡಲ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಮ್ಮತಿಸಿತು. 1776 ರ ಮಾರ್ಚ್ 1 ರಂದು ಪುರಂದರದಲ್ಲಿ ಕೌಲಿಗೆ ಸಹಿಯಾಯಿತು. ಬ್ರಿಟಿಷರು ರಘುನಾಥರಾಯನ ಸಂಬಂಧದಲ್ಲಿ ಖರ್ಚು ಮಾಡಿದ 12 ಲಕ್ಷ ರೂಪಾಯಿಗಳನ್ನು ಮರಾಠರು ಅವರಿಗೆ ಕೊಡಬೇಕಾಯಿತು. ಸೂರತ್ ಒಪ್ಪಂದವನ್ನು ತ್ಯಜಿಸಲಾಯಿತು. ರಘುನಾಥರಾವ್ ತನ್ನ ಸೈನ್ಯವನ್ನು ವಿಸರ್ಜಿಸಿ ಕೇವಲ 1,000 ಕುದುರೆಗಳ ದಳವನ್ನು ಹೊಂದಿ ಗುಜರಾತಿನ ಗೋಪರ್‍ಗಾಂವ್‍ನಲ್ಲಿ ನೆಲೆ ನಿಲ್ಲಬೇಕೆಂದು ನಿರ್ಧಾರವಾಯಿತು. ಸಲ್‍ಸತ್ತೆ ಮುಂತಾದ ವಿಭಾಗಗಳನ್ನು ಮರಾಠರು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು.

	ಈ ಕೌಲು ಮರಾಠ ಮಂತ್ರಿಮಂಡಲಕ್ಕಾಗಲಿ, ರಘುನಾಥರಾವ್ ಪೇಶ್ವೆಗಾಗಲೀ ಸಹಿಸಲಿಲ್ಲ. ರಘುನಾಥರಾವ್ ಬೇರೆ ನಿಯಮಗಳನ್ನೇ ಮುಂದಿಟ್ಟ. ಮತ್ತೆ ಮರಾಠರಿಗೂ ಬ್ರಿಟಿಷರಿಗೂ ಯುದ್ಧ ಆರಂಭವಾಯಿತು. ಸೂರತ್ ಕೌಲಿನ ನಿಯಮಗಳನ್ನು ಕಡ್ಡಾಯವಾಗಿ ಪರಿಪಾಲಿಸಬೇಕೆಂದು 1776 ರ ಏಪ್ರಿಲ್ 5 ರಂದು ಇಂಗ್ಲೆಂಡಿನಲ್ಲಿದ್ದ ಡೈರೆಕ್ಟರರಿಂದ ಆಜ್ಞೆ ಬಂತು. ಅವರು ಪುರಂದರ ಕೌಲನ್ನು ತಳ್ಳಿ ಹಾಕಿದ್ದರು. ಮುಂಬಯಿ ಸರ್ಕಾರ ಪುರಂದರ ಕೌಲನ್ನು ಗಾಳಿಗೆ ತೂರಿತು. ಮರಾಠರೊಂದಿಗೆ ಮತ್ತೆ ಯುದ್ಧ ಆರಂಭವಾಯಿತು. 1782 ರವರೆಗೆ ಯುದ್ಧ ನಡೆದು ಸಾಲ್ಬಾಯ್ ಕೌಲಿನಲ್ಲಿ ಪರ್ಯವಸಾನವಾಯಿತು. ಪುರಂದರ ಕೌಲಿನಲ್ಲಿದ್ದ ಷರತ್ತುಗಳೇ ಹೆಚ್ಚುಕಡಿಮೆ ಈ ಕೌಲಿನಲ್ಲೂ ಇದ್ದುವು. 						(ಎಸ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ